ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಮೀನಿನ ವೈವಿಧ್ಯತೆಗಳ ಪ್ರರ್ದಶನದ ರಾಜ್ಯ ಮಟ್ಟದ ಮತ್ಸ್ಯಮೇಳ ಮುರುಡೇಶ್ವರ ಸಮೀಪದ ಬೇಂಗ್ರೆಯ ಗಾಲ್ಫ ಕ್ಲಬ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇದೇ ಬರುವ ನವೆಂಬರ್ 21ರಿಂದ23ರ ತನಕ ಅದ್ಧೂರಿಯಾಗಿ ನಡೆಯುವ ಈ ಮತ್ಸ್ಯಮೇಳ ಹಾಗೂ ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸೇರಿದಂತೆ ರಾಜ್ಯ ಸಂಪುಟ ದರ್ಜೇ ಸಚಿವರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತ್ಸ್ಯಮೇಳದಲ್ಲಿ ದೇಶ, ಅಂತರಾಷ್ಟ್ರೀಯ ಮಟ್ಟದ ವಿವಿಧ ಬಗೆಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಅಪರೂಪದ ಮೀನಿನ ಸಂತತಿಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷ. ಮನೆಯ ಆವರಣದಲ್ಲಿ ಸಾಕಬಹುದಾದ ಮೀನುಗಳ ಪ್ರದರ್ಶನ ಹಾಗೂ ಮಾರಾಟ ಕೂಡ ಇಲ್ಲಿ ಆಯೋಜಿಸಲಾಗಿದೆ. ದೊಡ್ಡಮಟ್ಟದ ಅಕ್ವೇರಿಯಂ ಸುರಂಗ ಮಾರ್ಗವನ್ನು ನಿರ್ಮಿಸಿ ಮೀನುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕರಾವಳಿ ಭಾಗದ ಮೀನುಗಾರರ ಮುಖ್ಯ ಕಸುಬು ಮೀನುಗಾರಿಕೆ ಆಗಿದೆ. ಇಲ್ಲಿನ ಸಾಂಪ್ರಾದಾಯಿಕ ಮೀನುಗಾರಿಕೆ ನಡೆದುಕೊಂಡು ಬಂದ ಹಾದಿಯ ಇತಿಹಾಸವನ್ನು ಸಾರುವ ಪ್ರದರ್ಶನವನ್ನು ಈ ಮೇಳದಲ್ಲಿ ಆಯೋಜಿಸಿರುವುದು ಮೀನುಗಾರಿಕೆ ಮತ್ತು ಮೀನಿನ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗಿದೆ. ಇಲ್ಲಿನ ಮೀನುಗಾರರು ಹಿಡಿದು ತರುವ ವಿವಿಧ ಜಾತೀಯ ಮೀನುಗಳ ಸವಿಯನ್ನು ಸವಿಯಲು ಮೀನಿನ ಖಾದ್ಯ ಮೇಳವನ್ನು ಕೂಡ ಇಲ್ಲಿ ಆಯೋಜಿಸಲಾಗಿದ್ದು, ಮೀನು ಪ್ರಿಯರು ತಮಗಿಷ್ಟವಾದ ಮೀನಿನ ಖಾದ್ಯವನ್ನು ಖರೀದಿಸಿ ಇಲ್ಲಿ ಸೇವಿಸಲು ಅವಕಾಶ ಕಲ್ಪಿಸಲಾಗಿದೆ.
ಮೀನುಗಾರಿಕೆ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ಕರಾವಳಿ ಭಾಗದ ಮೀನಗಾರರ ಜೀವನ, ಇಲ್ಲಿನ ಮೀನಿನ ವೈವಿದ್ಯತೆ, ಇಲ್ಲಿನ ಮೀನಿನ ರುಚಿಯ ಬಗ್ಗೆ ರಾಜ್ಯ ಜನರಿಗೆ ತಿಳಿಯಬೇಕು ಎನ್ನುವ ಯೋಜನೆಯಿಂದ ಈ ಬೃಹತ್ ಮೇಳವನ್ನು ಆಯೋಜಿಸಲಾಗಿದೆ. ಮೂರು ದಿನದ ಮೇಳದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಈ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳೀಯ ಮೀನುಗಾರರ ಸಮಸ್ಯೆಗೂ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ. ಬೃಹತ್ ಮತ್ಸ್ಯ ಮೇಳ ನಡೆಯುತ್ತಿರುವುದರಿಂದ ಗಾಲ್ಫ ಮೈದಾನ ಭಾರೀ ಸಿದ್ಧತೆಗೊಂಡಿದ್ದು, ಸಂಜೆ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮವೂ ಹಮ್ಮಿಕೊಂಡಿರುವುದರಿಂದ ಮತ್ಸ್ಯುಮೇಳ ಜನಾಕರ್ಷಣೆಯ ತಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮತ್ಸ್ಯಮೇಳದ ಯಶಸ್ಸಿಗಾಗಿ ಮೀನುಗಾರಿಕೆ ಇಲಾಖೆ ಸೇರಿದಂತೆ ಹಲವರು ಶ್ರಮಿಸುತ್ತಿದ್ದಾರೆ. ಸಚಿವರು ಪ್ರತಿನಿಧಿಸುವ ಭಟ್ಕಳ ಕ್ಷೇತ್ರದಲ್ಲೇ ಈ ಮತ್ಸ್ಯಮೇಳ ನಡೆಯುತ್ತಿರುವುದರಿಂದ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.