ಭಟ್ಕಳ : ಇಲ್ಲಿನ ಕೋಣಾರ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ದಿ ಕೆಲಸಗಳು ನಿಂತಿದೆ ಎಂದು ವಿರೋದ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಸರಕಾರ ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನದ ಜತೆಗೆ ರಸ್ತೆ, ಮನೆ, ಬಾವಿ ಸೇರಿದಂತೆ ಅಗತ್ಯ ಅಭಿವೃದ್ದಿ ಕೆಲಸಗಳಿಗೂ ಅನುದಾನ ನೀಡುತ್ತಿದೆ. ಗ್ರಾಮಾಂತರ ಜನರ ಸಮಸ್ಯೆ ಆಲಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸ್ಪಂದನಾ ಸಭೆ ನಡೆಸುತ್ತಿದ್ದೇನೆ.ಇಂತಹ ಜನಸ್ಪಂದನಾ ಸಭೆಯಿಂದ ಜನತೆಗೆ ಅನುಕೂಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು. ಕ್ಷೇತ್ರದ ಜನರು ಯಾವುದೇ ರೀತಿಯ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತರುವ ಕೆಲಸ ಮಾಡಿ. ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸುವುದಿಲ್ಲ.
ಹಿಂದೆ ನಾನು ಶಾಸಕನಿದ್ದಾಗ 1500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಈಗ ಸಚಿವನಾಗಿದ್ದು, ಕ್ಷೇತ್ರಕ್ಕೆ 10 ಸಾವಿರ ಕೋಟಿ ಅನುದಾನ ತಂದು ಅಭಿವೃದ್ದಿ ಮಾಡುವ ಗುರಿ ಹೊಂದಿದ್ದೇನೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸ್ಪಂದನಾ ಸಭೆ ನಡೆಸುವುದರಿಂದ ಆ ಭಾಗದ ಸಮಸ್ಯೆ ತಿಳಿದು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು. ಗ್ರಾಮದ ಖಂಡ್ಕ ಸೇರಿದಂತೆ ವಿವಿಧ ಕಡೆ ಅಗತ್ಯವಿರುವ ಸೇತುವೆ, ರಸ್ತೆ ಕಾಮಗಾರಿ, ಕೋಣಾರ ಶಾಲೆಗೆ ನೂತನ ಕಟ್ಟಡ ಮಾಡಿಕೊಡುವಂತೆ ಜನರು ಸಚಿವರಲ್ಲಿ ಮನವಿ ಮಾಡಿದರು. ಕೋಣಾರ ಗುಡ್ಡದ ಮೇಲಿರುವ ಪಾಳು ಬಾವಿಯಲ್ಲಿ ಕೋಳಿ ಮತ್ತಿತರ ತ್ಯಾಜ್ಯ ಎಸೆಯುವುದರಿಂದ ಗ್ರಾಮದ ಕುಡಿಯುವ ನೀರಿನ ಬಾವಿಗೆ ಕೊಳಕು ನೀರು ಸೇರಿ ಬಾವಿಯ ನೀರು ಕುಡಿಯದಾಗಿದ್ದು, ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸಚಿವರಿಗೆ ಗ್ರಾಮಸ್ಥರು ವಿವಿಧ ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಕೋಣಾರದ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಜನಾರ್ಧನ ದೇವಡಿಗ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮೀ ಗೊಂಡ, ರಾಮಕೃಷ್ಣ ಹೆಬ್ಬಾರ, ಶಂಕರ ನಾಯ್ಕ, ಗಣೇಶ ಗೊಂಡ, ಸಂಕಯ್ಯ ಗೊಂಡ ಮುಂತಾದವರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು.