ಕರಾವಳಿ ಪ್ರಭ ನ್ಯೂಸ್
ಭಟ್ಕಳ ; ರಾಜ್ಯದ ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ಶೂನ್ಯ ಸುರಕ್ಷತೆಯ ಗ್ಯಾರಂಟಿ ಎಂಬ ಹೊಸ ಯೋಜನೆ ಜಾರಿಗೊಳಿಸಿದ್ದು, ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣ ಹದಗೆಟ್ಟು ಮಹಿಳೆಯರು ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ ಅವರು ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಪೊಲೀಸರ ಭಯವಿಲ್ಲದೆ ದಿನವೂ ಕೊಲೆ, ಸುಲಿಗೆ ಅತ್ಯಾಚಾರ ಮುಂತಾದವು ನಡೆಯುತ್ತಿದ್ದು, ಮೊನ್ನೆ ನೇಹಾ, ನಿನ್ನೆ ಅಂಜಲಿ, ಇಂದು ಇನ್ಯಾರೋ ಎನ್ನುವಂತಾಗಿದೆ. ಕೆಲಸಕ್ಕೆ, ಕಾಲೇಜಿಗೆ ಹೋದಂತಹ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಇಲ್ಲದೇ ಪಾಲಕರು, ಪೋಷಕರು ಭಯದಿಂದ ಬದುಕುವಂತಾಗಿದೆ ಎಂದಿರುವ ಅವರು ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಘಟಿಸಿರುವ ಘಟನೆಗಳಿಂದ ಸಜ್ಜನ ಸಮಾಜ ತಲೆತಗ್ಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 2023ರ ಡಿಸೆಂಬರ್ 23 ರಂದು ಬೆಳಗಾವಿಯ ವಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರ ಗೊಳಿಸಿದ ಪ್ರಕರಣ, ರಾಣೇಬೆನ್ನೂರಿನ ಅರೆಮಲ್ಲಾಪುರದಲ್ಲಿ 50 ವರ್ಷದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿದ ಪ್ರಕರಣದಿಂದ ಜನರು ಆತಂಕಗೊಂಡಿದ್ದರು. ಹಾವೇರಿಯಲ್ಲಿ ಏಳು ಮಂದಿ ಮುಸ್ಲಿಂ ಪುರುಷರಿಂದ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್ 18ರಂದು ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಅವರ ಮಗಳು ನೇಹಾಳನ್ನು 11 ಬಾರಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ. ಮೇ.9 ರಂದು ಕೊಡಗಿನ ಸೂರ್ಲಬ್ಬಿ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಯುಎಸ್ ಮೀನಳ ರುಂಡವನ್ನು ಪ್ರಕಾಶ ಎನ್ನುವ ವ್ಯಕ್ತಿ ಕತ್ತರಿಸಿ ಭಯ ಹುಟ್ಟಿಸಿರುವುದು. ಮೇ 15ರಂದು ಹುಬ್ಬಳ್ಳಿಯಲ್ಲಿ 21 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವ ಎಂಬುವವನು ಚಾಕುವಿನಿಂದ ಹಿರಿದು ಕೊಲೆ ಮಾಡಿರುವುದು ಈ ಎಲ್ಲಾ ಘಟನೆಗಳನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ನಿಜ ಎನಿಸಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರ ಕೊಲೆಗಡುಕರ ಸರ್ಕಾರ ಎನ್ನುವಂತಾಗಿದೆ ಎಂದು ಆರೋಪಿಸಿರುವ ಅವರು ರಾಜ್ಯದಲ್ಲಿ ಹೆಣ್ಣು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಪರಾಧಿಗಳಿಗೆ ರಕ್ಷಣೆ ಎಂಬಾತಾಗಿದ್ದು ಹಿಂಸಾತ್ಮಕ ಪ್ರವೃತ್ತಿ ವಿಪರೀತವಾಗಲು ಕಾರಣವಾಗಿದೆ ಎಂದು ಆರೋಪಿಸಿರುವ ಶಿವಾನಿ ಅವರು ರಾಜ್ಯದ ಕಾಂಗ್ರೆಸ್ ಸರಕಾರ ಇತರ ಗ್ಯಾರಂಟಿಯ ಜತೆಗೆ ಮಹಿಳೆಯರಿಗೆ ಶೂನ್ಯ ಸುರಕ್ಷತೆಯ ಗ್ಯಾರಂಟಿ ಎಂಬ ಹೊಸ ಯೋಜನೆ ಜ್ಯಾರಿ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.