ಕರಾವಳಿ ಪ್ರಭ ನ್ಯೂಸ್
ಭಟ್ಕಳ ; ಶಿರಾಲಿ ಅಳ್ವೆಕೋಡಿಯ ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ ೨೯ರಿಂದ ಜುಲೈ ೯ರ ತನಕ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಅವರು ಹೇಳಿದರು.ಅವರು ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವವು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು ನೂತನ ಯಜ್ಞಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶಿಖರ ಕಲಷ ಪ್ರತಿಷ್ಟೆ, ಶ್ರೀ ಶತಚಂಡಿಯಾಗ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗಾ ಹವನ, ಶ್ರೀ ಲಕ್ಷ ಕಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಮಹಾ ಅನ್ನಸಂತರ್ಣಣೆ ನಡೆಯಲಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಜು.೭ ಮತ್ತು ೮ರಂದು ಸಂಜೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಗೌರವಾರ್ಪಣೆ ನಡೆಯಲಿದ್ದು, ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ, ಅರ್ಚಕ ಮುಕುಂದ ಪುರಾಣಿಕ, ಪ್ರಮುಖರಾದ ಮಂಜುನಾಥ ಕೋಡಿಹಿತ್ಲು, ದೇವಪ್ಪ ಕೆ. ಮೊಗೇರ, ಭಾಸ್ಕರ ಮೊಗೇರ, ವಿಠಲ ದೈಮನೆ, ಭಾಸ್ಕರ ದೈಮನೆ, ಯಾದವ ಮೊಗೇರ, ರಾಜು ಮೊಗೇರ ಮುಂತಾದವರು ಉಪಸ್ಥಿತರಿದ್ದರು.