ಭಟ್ಕಳ : ಮುರುಡೇಶ್ವರ ಸಮೀಪದ ಬೇಂಗ್ರೆಯ ಗಾಲ್ಫ ಮೈದಾನದಲ್ಲಿ ನವೆಂಬರ್ 21ರಿಂದ 23ರ ವರೆಗೆ ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ರಾಜ್ಯಮಟ್ಟದ ಮತ್ಸ್ಯ ಮೇಳ -2024 ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.ಬೇಂಗ್ರೆಯ ಗಾಲ್ಫ ರೆಸ್ಟೋರೆಂಟ್ ನಲ್ಲಿ ಮಂಗಳವಾರ ಮಧ್ಯಾಹ್ನ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸೇರಿದಂತೆ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವಿಶ್ವಮೀನುಗಾರಿಕಾ ದಿನಾಚರಣೆಯನ್ನು ಕರಾವಳಿ ಜಿಲ್ಲೆಯ ಭಟ್ಕಳದಲ್ಲಿ ನಡೆಸಿ ಮೀನುಗಾರಿಕೆಯ ಬಗ್ಗೆ ಮತ್ತಷ್ಟು ತಿಳುವಳಿಕೆ ನೀಡಲು ನಿರ್ಧರಿಸಲಾಗಿದೆ. ಮೀನುಗಾರಿಕಾ ದಿನಾಚರಣೆಯನ್ನು ಕೇವಲ ಮೀನುಗಾರರಿಗಾಗಿ, ಮೀನು ತಿನ್ನುವವರಿಗಾಗಿ ಮಾತ್ರ ಅಲ್ಲ, ಇದು ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅನೇಕ ವೈವಿದ್ಯತೆಯನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಮೀನುಗಾರಿಕೆ, ಮೀನುಗಾರಿಕೆಯ ಕುರಿತು ಅರಿವು ಮೂಡಿಸುವುದರೊಂದಿಗೆ, ಮನೆಯಲ್ಲಿ ಮೀನು ಸಾಕಾಣಿಕೆ ಮಾಡುವವರಿಗೆ, ಆಕ್ವಾರಿಯಂ ಕುರಿತು, ಮೀನು ಕೃಷಿಯ ಕುರಿತು ಆಸಕ್ತಿ ಇರುವವರಿಗೆ ಕೂಡಾ ಅನುಕೂಲ ಮಾಡಿಕೊಲಾಗಿದೆ ಎಂದರು. ರಾಜ್ಯದ ಬೇರೆ ಬೇರೆ ಕಡೆಗಳಿಂದ ೫ ಲಕ್ಷ ಜನರು ಈ ಮೂರು ದಿನಗಳ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೇಳದಲ್ಲಿ ವಿವಿಧ ಸ್ಟಾಲ್ಗಳನ್ನು ಹಾಕಲಾಗುತ್ತಿದ್ದು ಅಲ್ಲಿಯೂ ಕೂಡಾ ವಿವಿಧ ಬಗೆಯ ಮೀನು ಖಾದ್ಯ ಲಭ್ಯವಿರುತ್ತದೆ. ಅಲ್ಲದೇ ಬಂದವರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಮೀನುಗಾರಿಕೆಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಉತ್ತರ ಕನ್ನಡ ಮುಂದಿರುವಂತೆ, ಒಳನಾಡು ಮೀನುಗಾರರು ಕೂಡಾ ಮುಂದೆ ಇದ್ದಾರೆ. ಒಂದು ಹಂತದಲ್ಲಿ ಕರಾವಳಿ ಹಾಗೂ ಒಳನಾಡು ಮೀನುಗಾರಿಕೆ ಸರಿಸಮನಾಗಿದೆ ಎಂದ ಸಚಿವರು ಇದು ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಮೂರು ದಿನಗಳ ಹಬ್ಬವಾಗಿದೆ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿದೆಡೆಗಳಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕಾ ದಿನಾಚರಣೆ ಈ ಬಾರಿ ಮೀನುಗಾರರ ಸಮುದಾಯದ ಮಧ್ಯೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದೂ ಹೇಳಿದರು. ದಿನಾಂಕ ೨೧, ೨೨ ಹಾಗೂ ೨೩ ರಂದು ವಿವಿಧ ಗೋಷ್ಠಿಗಳನ್ನು ಆಯೋಜಿಲಾಗಿದ್ದು ಮೀನುಗಾರಿಕೆಯಲ್ಲಿ, ಮೀನು ಸಂಸ್ಕರಣೆಯಲ್ಲಿ, ಮೀನು ಸಾಕಾಣೀಕೆಯಲ್ಲಿ, ಮೀನು ಖಾದ್ಯ ತಯಾರಿಕೆ ಸೇರಿದಂತೆ ವಿವಿಧ ಪರಿಣಿತರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕಲಾವಿದರು ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ ಎಂದು ಮಂಕಾಳ ವೈದ್ಯ ಹೇಳಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶಕುಮಾರ ಇದ್ದರು.
ಅತ್ಯಾಕರ್ಷಕ ಮತ್ಸ್ಯ ಮೇಳ 2024
ಭಟ್ಕಳದ ಬೇಂಗ್ರೆಯ ಗಾಲ್ಫ ಮೈದಾನದಲ್ಲಿ ನವೆಂಬರ್ 21ರಿಮದ 23ರ ವರೆಗೆ ರಾಜ್ಯಮಟ್ಟದ ಮತ್ಸ್ಯ ಮೇಳ ನಡೆಯಲಿದ್ದು,ಇದರಲ್ಲಿ ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ವಾರಿಯಮ್ ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು, ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶನ ನಡೆಯಲಿದೆ. ಸಮುದ್ರ ಕಳೆ ಪ್ರದರ್ಶನ, ಮೀನು ಆಹಾರದ ಮಳಿಗೆಗಳು, ಅಲಂಕಾರಿಕ ಮೀನು ಮಾರಾಟ ಸೇರಿದಂತೆ ಮೇಳದಲ್ಲಿ ಸುರಂಗ ಅಕ್ವೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. ಅದೇ ಸಮಯದಲ್ಲಿ, ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿಸಲಿದ್ದು ಮತ್ತು ಪ್ರಗತಿಪರ ರೈತರು ತಮ್ಮ ಯಶಸ್ಸಿನ ಯಶೋಗಾಥೆಗಳನ್ನು ಹಂಚಿಕೊಳ್ಳಲಿದಾರೆ ನಂತರ ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೀನುಗಾರಿಕೆ ಮತ್ತು ಮೀನುಕೃಷಿಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳಿಗೆ ಅರ್ಥಪೂರ್ಣ, ಫಲಿತಾಂಶ-ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ಸ್ಯ ಮೇಳದಲ್ಲಿ ಮುಕ್ತ ಅವಕಾಶವಾಗಿರುತ್ತದೆ.