ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಧರ್ಮಸ್ಥಳದ ಉಜಿರೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭಟ್ಕಳದ ಕರಿಕಲ್ ಧ್ಯಾನ್ ಮಂದಿರದಲ್ಲಿ ತಮ್ಮ ಐದನೇ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿದ್ದು, ಎರಡನೇ ದಿನವಾದ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಮತ್ತು ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸೋಮವಾರ ಬೆಳಿಗ್ಗೆಯಿಂದ ನಡೆದ ವಿವಿಧ ಧಾಮಿ೯ಕ ಹಾಗೂ ಶ್ರೀಗಳ ಪಾದಪೂಜೆಯ ಸಂದರ್ಭದಲ್ಲಿ ತಾಲ್ಲೂಕಿನ ಭಕ್ತರಲ್ಲದೇ ಪರವೂರಿನ ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ತಾಲ್ಲೂಕಿನ ಮುಂಡಳ್ಳಿ ಕೂಟದವರು ಗುರುಮಠದ ಅಧ್ಯಕ್ಷ ಅರುಣ ನಾಯ್ಕ ನೇತೃತ್ವದಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಪಾದಪೂಜೆ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಮಠದ ವತಿಯಿಂದ ಭಕ್ತರಿಗೆ ಶುಚಿರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದ ಯಕ್ಷಗಾನ ತಾಳಮದ್ದಲೆ ಭಕ್ತರ ಮನರಂಜಿಸಿತು.
ಭಾನುವಾರ ಸಂಜೆ ಬಿಜೆಪಿ ರಾಜ್ಯ ಘಟಕ ಮಾಜಿ ಅಧ್ಯಕ್ಷ ನಳೀನಕುಮಾರ ಕಟೀಲ ತಮ್ಮ ಸಂಗಡಿಗರೊಂದಿಗೆ ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆದುಕೊಂಡರು. ಸೋಮವಾರ ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ಆಗಮಿಸಿ ಶ್ರೀಗಳ ಆರ್ಶಿವಾದ ಪಡೆದುಕೊಂಡರು. ಶ್ರೀಗಳ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಕರಿಕಲ್ ಧ್ಯಾನಮಂದಿರ ಭಕ್ತರಿಂದ ತುಂಬಿದೆ. ಉಜಿರೆ ಅಶೋಕ ಭಟ್ ಸಂಯೋಜನೆಯಲ್ಲಿ ಬಾಲಕಾಂಡದಿಂದ ಉತ್ತರಕಾಂಡದ ವರೆಗೆ ಸಂಪೂರ್ಣ ರಾಮಾಯಣ ಯಕ್ಷಗಾನ ಆರಂಭಗೊಂಡಿದ್ದು, ಈ ಪ್ರದರ್ಶನ ಜುಲೈ 28ರ ವರೆಗೂ ನಡೆಯಲಿದೆ.