ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಸಾರ್ವಜನಿಕರಿಗೆ ಅಕ್ರಮ ಕರೆಗಳನ್ನು ಮಾಡಿ ಆಧಾರ್, ಏಟಿಎಂ ಮತ್ತಿತರ ನಂಬರಗಳನ್ನು ಪಡೆದು ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ಜಾಲ ಸಕ್ರೀಯವಾಗಿದ್ದು, ಯಾವುದೇ ಕಾರಣಕ್ಕೂ ಅನಾಮಿಕ ವ್ಯಕ್ತಿಗಳಿಂದ ಇಂತಹ ಕರೆಗಳು ಬಂದಾಗ ಮಾಹಿತಿ ಹಂಚಿಕೊಳ್ಳಬಾರದು ಎಂದು ಇಲ್ಲಿನ ಮಜ್ಲಿಸೆ ಇಸ್ಲಾಹ ವ ತಂಝೀಂನ ರಾಜಕೀಯ ಸಂಚಾಲಕ ಹಾಗೂ ನ್ಯಾಯವಾದಿ ಇಮ್ರಾನ್ ಲಂಕಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ತಂಝೀಂ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನಾಮಿಕ ಕಾಲ್ ಬರುತ್ತಿದ್ದು, ಅವರಿಂದ ತಾವು ಆದಾರ ತೆರಿಗೆ, ಬ್ಯಾಂಕು ಮತ್ತಿತರ ಇಲಾಖೆಯ ಅಧಿಕಾರಿಗಳುಎಂದು ಸುಳ್ಳು ಹೇಳಿ ಆಧಾರ್ ಕಾರ್ಡ, ಪಾನ್ ಕಾರ್ಡ, ಏಟಿಎಂ ಕಾರ್ಡ ನಂಬರು ಸಹಿತ ವಿವಿಧ ಮಾಹಿತಿ ಪಡೆಯುವುದರ ಜತೆಗೆ ಓಟಿಪಿ ಕೂಡ ಹೇಳುವಂತೆ ತಿಳಿಸಲಾಗುತ್ತದೆ. ಹೀಗೆ ಕರೆ ಬಂದು ಎಲ್ಲಾ ಮಾಹಿತಿ ನೀಡಿದ ಕೆಲವೇ ಕ್ಷಣದಲ್ಲಿ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಡ್ರಾ ಆಗುತ್ತಿದೆ. ಭಟ್ಕಳದಲ್ಲೂ ಸಹ ಈ ರೀತಿ ಕರೆ ಸ್ವೀಕರಿಸಿ ಮಾಹಿತಿ ನೀಡಿದವರು ಸಾಕಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರಿಂದ ತಂಝೀಂ ಗೆ ಸಾಕಷ್ಟು ದೂರು ಬಂದಿದ್ದು, ಅನಾಮಿಕ ಕರೆ ಸ್ವೀಕರಿಸದಂತೆ ಮತ್ತು ಯಾವುದೇ ಕಾರಣಕ್ಕೂ ಮಾಹಿತಿ ನೀಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ತಂಝೀಂನಿಂದ ಆಗುತ್ತಿದೆ. ಈ ರೀತಿಯ ಕರೆ ಬಂದರೆ 1930 (ಸೈಬರ್ ಕ್ರೈಂ) ನಂಬರಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಿಡಿಯೋ ಕಾಲ್ ಮಾಡಿ ಹಣ ಎಗರಿಸುವ ಮೋಸದ ಜಾಲವೂ ಹೆಚ್ಚಾಗಿದ್ದು ಈ ಬಗ್ಗೆಯೂ ಸಹ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು. ಉಪಸ್ಥಿತರಿದ್ದ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಭಟ್ಕಳದಲ್ಲಿ ಮುಸ್ಲೀಮರು ಈ ಸಮಯದಲ್ಲಿ ಮದುವೆ ಸಮಾರಂಭ ಇಟ್ಟುಕೊಳ್ಳುತ್ತಿದ್ದು, ಮದುವೆ ಆದವರು ಕುಟುಂಬದವರೊಂದಿಗೆ ಪಿಕ್ ನಿಕ್ ಗಾಗಿ ಜಾಲಿ ಸಮುದ್ರ ತೀರ ಮತ್ತಿತರ ಕಡೆ ಹೋಗುತ್ತಿದ್ದು, ಮಳೆಗಾಲ ಆಗಿರುವುದರಿಂದ ಅತೀ ಜಾಗೃತಿ ವಹಿಸುವುದು ಅಗತ್ಯವಿದೆ ಎಂದ ಅವರು ಭಟ್ಕಳದಲ್ಲಿ ಮಳೆ ಬಂದಾಗ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಳೆ ನೀರು ತುಂಬಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನಹರಿಸಿ ಸಮಸ್ಯೆ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ ಜೆ, ತಂಝೀಂ ಮುಖಂಡ ಅಝೀಜುರ್ರೆಹಮಾನ ಇದ್ದರು.