ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಶಕ್ತಿಕ್ಷೇತ್ರಗಳಲ್ಲೊಂದಾದ ಶಿರಾಲಿ ಅಳ್ವೆಕೋಡಿಯ ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ ೨೯ರಿಂದ ಜುಲೈ ೯ರ ತನಕ ವಿಜ್ರಂಭಣೆಯಿಂದ ನಡೆಯಲಿದೆ.
ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವವು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. 29 ರಂದು ಸಂಜೆ 7 ಗಂಟೆಗೆ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಗಮಿಸಲಿದ್ದು, ಶ್ರೀಗಳಿಂದ ಆಶೀರ್ವಚನ, ಪಾದ ಪೂಜೆ ನಡೆಯಲಿದೆ. ಜೂ. 30 ರಂದು ಶ್ರೀಗಳ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜು.1 ರಂದು ಶತಚಂಡಿಕಾಯಾಗ ಆರಂಭ, ಲಕ್ಷ ಕುಂಕುಮಾರ್ಚನೆ ನಡೆಯಲಿದೆ.ಜುಲೈ 7ರ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ನೂತನ ಯಜ್ಞಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗಾ ಹವನ, ಶ್ರೀ ಲಕ್ಷ ಕಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಮಹಾ ಅನ್ನಸಂತರ್ಣಣೆ ನಡೆಯಲಿದೆ . ಕಾರ್ಯಕ್ರಮದ ಅಂಗವಾಗಿ ಜು.೭ ಮತ್ತು ೮ರಂದು ಸಂಜೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಗೌರವಾರ್ಪಣೆ ನಡೆಯಲಿದೆ. ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇತ್ತೀಚಿನ ವರ್ಷಗಳಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರಿದ್ದು, ಈ ದುರ್ಗಾಪರಮೇಶ್ವರಿ ದೇವಿ ನಂಬಿ ಪೂಜಿಸಿದರೆ ಕಷ್ಟ ಕಾರ್ಪಣ್ಯ ದೂರ ಮಾಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಭಕ್ತರ ಪಾಲಿನ ಅಮ್ಮನಾಗಿದ್ದಾಳೆ. ಇಂದಿನಿಂದ ಜು. 9ರ ವರೆಗೆ ಶ್ರೀ ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವನ್ನು ಅದ್ಧೂರಿಯಾಗಿ ಅಚರಿಸಲು ಭಕ್ತರು ಸನ್ನದ್ಧರಾಗಿದ್ದು, ಅಳ್ವೆಕೋಡಿಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಎಂ ಮೊಗೇರ ಮತ್ತು ಆಡಳಿತ ಮಂಡಳಿಯ ಸದಸ್ಯರು ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದು, ತಾಲ್ಲೂಕು ಸೇರಿದಂತೆ ವಿವಿಧ ಭಾಗದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ.