ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಬೆಳಕೆಯ ಉದ್ಯಮಿ ಹಾಗೂ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕರು ತಾವು ಖರೀಧಿಸಿದ ಜಾಗದಲ್ಲಿ ಶಾಲೆ ಇರುವುದನ್ನು ಮನಗಂಡು ನಾಲ್ಕು ಗುಂಟೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿ ಮಾದರಿಯಾಗಿದ್ದಾರೆ.
ತಾಲೂಕಿನ ಬೆಳಕೆ ಕಲಬಂಡಿಯ ಮಾದೇವ ನಾಯ್ಕ ದಂಪತಿಗಳು ಇತ್ತೀಚೆಗೆ ಜಾಗವೊಂದನ್ನು ಖರೀಧಿ ಮಾಡಿದ್ದರು. ತಾವು ಖರೀಧಿಸಿದ ಸ್ಥಳದಲ್ಲಿ ಹೇರಬುಡಕಿ ಸರಕಾರಿ ಕಿರಿಯ ಪ್ರಾಥಮಿ ಶಾಲೆ ಇರುವುದನ್ನು ಮನಗಂಡ ಇವರು ಶಾಲೆ ಇರುವ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡಲು ನಿರ್ಧರಿಸಿ ಅಗತ್ಯದ ಕಾಗಪತ್ರಗಳನ್ನು ತಾವೇ ತಯಾರಿಸಿ ಶಾಲೆಗೆ ಹಸ್ತಾಂತರಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾಲೂಕಿನ ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರಕಾರಿ ಕಿರಿಯ ಪ್ರಾಥಮಿ ಶಾಲೆಯು ೧೯೯೨ರಿಂದಲೂ ಖಾಸಗೀ ಜಾಗಾದಲ್ಲಿ ನಡೆಯುತ್ತಿತ್ತು. ಅಂದಿನಿಂದಲೇ ಜಾಗಾವನ್ನು ಶಾಲೆಗೆ ಹಸ್ತಾಂತರ ಮಾಡಿಕೊಳ್ಳುವಲ್ಲಿ ಪ್ರಯತ್ನಗಳೂ ನಡೆಯುತ್ತಿದ್ದರೂ ಕೂಡಾ ಅದು ಫಲಪ್ರದವಾಗಿರಲಿಲ್ಲ. ಗ್ರಾಮೀಣ ಭಾಗದ ಶಾಲೆಯಾದ್ದರಿಂದ ಇಲ್ಲಿಗೆ ಬರುವ ಮಕ್ಕಳೂ ಗ್ರಾಮೀಣ ಭಾಗದಿಂದಲೇ ಬರುವವರಾಗಿದ್ದು ಅವರಿಗೆ ಯಾವುದೇ ತೊಂದರೆಯಾಗಬಾರದು ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಬೇಕು ಎನ್ನುವುದು ಮಾದೇವ ನಾಯ್ಕ ದಂಪತಿಗಳ ಮುಖ್ಯ ಉದ್ದೇಶವಾಗಿತ್ತು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮಾದೇವ ನಾಯ್ಕ ಅವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗೂ ಯಾವುದೇ ಶಾಲೆಗೆ ಸರಕಾರಿ ಸೌಲಭ್ಯ ಬರುವಲ್ಲಿ ಶಾಲೆಯು ಸ್ವಂತ ಜಾಗಾದಲ್ಲಿ ಇರಬೇಕಾಗುತ್ತದೆ ಎನ್ನುವ ಕಲ್ಪನೆಯಲ್ಲಿ ಜಾಗಾವನ್ನು ದಾನವಾಗಿ ಕೊಟ್ಟು ಅಗತ್ಯದ ಕಾಗದ ಪತ್ರಗಳನ್ನು ಮಾಡಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ ೨೦೨೩-೨೦೨೪ನೇ ಶೈಕ್ಷಣಿಕ ಸಾಲಿನಲ್ಲಿ ೧ ನೇ ತರಗತಿಯಿಂದ ೫ನೇ ತರಗತಿಯ ತನಕ ಒಟ್ಟೂ ೨೫ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಗ್ರಾಮೀಣ ಭಾಗದ ಈ ಶಾಲೆಯ ಮೂಲಭೂತ ಸೌಲಭ್ಯವನ್ನು ವದಗಿಸುವಲ್ಲಿ ಸಹಕಾರಿಯಾಗಲಿ ಎಂದು ಮಾದೇವ ನಾಯ್ಕ ದಂಪತಿಗಳು ಹಾರೈಸಿದ್ದಾರೆ. ಇತ್ತೀಚೆಗೆ ಶಾಲೆಗೆ ತೆರಳಿದ್ದ ಮಾದೇವ ನಾಯ್ಕ ದಂಪತಿಗಳು ಶಾಲೆಯ ಪಹಣಿ ಪತ್ರಿಕೆಯನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಇವರ ಕಾರ್ಯವನ್ನು ಮುಖ್ಯ ಶಿಕ್ಷಕಿ ಆಫ್ರಿನ್ ಶೇಖ, ಸಹ ಶಿಕ್ಷಕಿ ಸವಿತಾ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಶ್ಲಾಘಿಸಿದ್ದಾರೆ.