ಕರಾವಳಿ ಪ್ರಭ ನ್ಯೂಸ್
ಭಟ್ಕಳ: ಪಟ್ಟಣದ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಮಂಚೂಣಿಯಲ್ಲಿದೆ ಎಂದು ಪತ್ರಕರ್ತ ರಾಘವೇಂದ್ರ ಹೆಬ್ಬಾರ ಹೇಳಿದರು.
ಶಾಲೆಯಲ್ಲಿ ಸಂಭ್ರಮದಿಂದ ಏರ್ಪಡಿಸಲಾದ ಅಪ್ಪಂದಿರ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾಭಾರತಿ ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ಈ ಶಾಲೆಯಲ್ಲಿ ಭಗವದ್ಗೀತೆ, ಯೋಗ, ಕರಾಟೆ, ಸಂಗೀತ, ಅಕ್ಷರ ಅಭ್ಯಾಸ ಕಾರ್ಯಕ್ರಮ, ಅಜ್ಜಂದಿರ ದಿನ, ಮಕ್ಕಳಿಂದ ಪಾಲಕರ ಪಾದಪೂಜೆ ಸೇರಿದಂತೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ತಂದೆತಾಯಂದಿರು ಮಕ್ಕಳ ಬಗ್ಗೆ ಸದಾ ಜಾಗೃತೆ ವಹಿಸಬೇಕು. ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಬೇಕು ಎಂದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇನ್ನೋರ್ವ ಅತಿಥಿಯಾಗಿದ್ದ ತೆಂಗಿನಗುಂಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ನಾಗರಾಜ ಎನ್ ಎಸ್ ಮಕ್ಕಳು ಮತ್ತು ತಂದೆಯರ ನಡುವಿನ ಬಾಂಧವ್ಯದ ಬಗ್ಗೆ ವಿವರಿಸಿ ವಿದ್ಯಾಭಾರತಿ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ರೂಪಾ ರಮೇಶ ಖಾರ್ವಿ ಮಾತನಾಡಿ, ಸದಾ ಒತ್ತಡದಲ್ಲಿರುವ ಅಪ್ಪಂದಿರನ್ನು ಶಾಲೆಗೆ ಕರೆಯಿಸಿ ಮಕ್ಕಳ ಜತೆ ಸ್ವಲ್ಪ ಸಮಯ ಕಳೆಯಲು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪಾಲಕರು ಮಕ್ಕಳಿಗೆ ತಮ್ಮ ಬಗ್ಗೆ ನಿಜಸ್ಥಿತಿ ತಿಳಿಸಬೇಕು. ಆಗ ಮಾತ್ರ ಮಕ್ಕಳು ಎಲ್ಲವನ್ನೂ ಅರ್ಥ ಮಾಡಿಕೊಂಡು ಬೆಳೆಯಲು ಸಾಧ್ಯ ಎಂದರು. ಶಿಕ್ಷಕಿ ಕವಿತಾ ನಾಯ್ಕ ಸ್ವಾಗತಿಸಿದರು. ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳಾದ ಅರ್ಜವ್ ಜೈನ್ ಮತ್ತು ರಾಬಿಯಾ ನಿರೂಪಿಸಿದರು. ಶಿಕ್ಷಕಿ ಅಶ್ವಿನಿ ನಾಯ್ಕ ಮತ್ತಿತರರು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ಅಪ್ಪಂದಿರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆ ಮತ್ತು ಆಟ ಏರ್ಪಡಿಸಲಾಗಿತ್ತು.