ಕೋಣಾರದಲ್ಲಿ ಬಿಎಸ್ಸೆನ್ನೆಲ್ ಟವರ್ ಕಾಮಗಾರಿಗೆ ಚಾಲನೆ  ಬಹುವರ್ಷಗಳ ಬೇಡಿಕೆ ಸದ್ಯದಲ್ಲೇ ಈಡೇರಿಕೆ 

ಭಟ್ಕಳ : ತಾಲ್ಲೂಕಿನ ಕೋಣಾರದಲ್ಲಿ ಬಹುವರ್ಷಗಳ ಬೇಡಿಕೆಯಾಗಿದ್ದ ಬಿಎಸ್ಸೆನ್ನೆಲ್ ಟವರ್ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ. ಬಿಎಸ್ಸೆನ್ನೆಲ್ ಟವರ್ ನಿರ್ಮಾಣ ಆಗುತ್ತಿರುವುದರಿಂದ ಕೋಣಾರ ಜನತೆಯಲ್ಲಿ ಸಂತಸ ತಂದಿದೆ.ಟವರ್ ಗಾಗಿ ಸರಕಾರ, ಸಂಸದರು, ಶಾಸಕರ ಮೇಲೆ ತೀರಾ ಒತ್ತಡ ಹೇರಲಾಗಿತ್ತು. ಕೊನೆಗೂ ಈ ಭಾಗದಲ್ಲಿ ಟವರ್ ಮಂಜೂರಿ ಆಗಿದ್ದು, ಜನರು ಮೊಬೈಲ್ ಕರೆ ಮಾಡುವ ಮತ್ತು ಸ್ವೀಕರಿಸುವ ಕಾಲ ಸದ್ಯದಲ್ಲೇ ಬರಲಿದೆ. ಟವರ್ ಕಾಮಗಾರಿಗೆ ಚಾಲನೆ ನೀಡಿದ ನಂತರದಲ್ಲಿ ಕೋಣಾರ ಗ್ರಾಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾತನಾಡಿದ ಬಿಎಸ್ಸೆನ್ನೆಲ್ ಅಭಿಯಂತರ ನಾಗರಾಜ ಮೊಗೇರ, ದೇಶದಲ್ಲಿ 26 ಸಾವಿರ ಬಿಎಸ್ಸೆನ್ನೆಲ್ ಟವರ್ ಮಂಜೂರಿಯಾಗಿದ್ದು, ಅದರಲ್ಲಿ ಕೋಣಾರ, ಹಸ್ರವಳ್ಳಿ, ಹುಡೀಲ್ ಗ್ರಾಮವೂ ಸೇರಿದೆ. ಕೋಣಾರದಲ್ಲಿ ಬಿಎಸ್ಸೆನ್ನೆಲ್ ಟವರ್ ಆಗಬೇಕೆಂದು ಸಾರ್ವಜನಿಕರು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಇದೀಗ ಕಾಲ ಕೂಡಿ ಬಂದಿದ್ದು, ಟವರ್ ಕಾಮಗಾರಿ ಆರಂಭಿಸಲಾಗಿದೆ. ನಿರ್ಮಿಸುತ್ತಿರುವ ಟವರ್ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಕೂಡಿದೆ. ಟವರ್ ಕಾಮಗಾರಿ ಎರಡು ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಅಗಷ್ಟು ಅಂತ್ಯದೊಳಗೆ ಇಲ್ಲಿನ ಜನರ ಬಹುವರ್ಷದ ಬೇಡಿಕೆ ಈಡೇರಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ ಮಾತನಾಡಿ,ಬಿಎಸ್ಸೆನ್ನೆಲ್ ಟವರ್ ಆಗುವುದರಿಂದ ಕೋಣಾರದ ಜನತೆಗೆ ಅನುಕೂಲವಾಗಲಿದೆ. ಟವರ್ ಇಲ್ಲದೇ ಇಲ್ಲಿನ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸತತ ಪ್ರಯತ್ನದಿಂದ ಟವರ್ ಮಂಜೂರಿಸಿಕೊಂಡು ಬರಲಾಗಿದೆ ಎಂದರು. ಉಪಸ್ಥಿತರಿದ್ದ ಪತ್ರಕರ್ತ ರಾಘವೇಂದ್ರ ಹೆಬ್ಬಾರ ಮಾತನಾಡಿ, ಕೋಣಾರ ಜನತೆಯ ಬಹು ವರ್ಷದ ಕನಸು ಕೇವಲ ಎರಡೇ ತಿಂಗಳಲ್ಲಿ ನನಸಾಗಲಿದೆ. ಟವರ್ ಆಗುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಗ್ರಾಪಂ. ಸದಸ್ಯ ಗೋವಿಂದ ನಾಯ್ಕ, ಟವರ್ ನಿರ್ಮಿಸಲು ಸ್ಥಳ ಒದಗಿಸಿದ ವೆಂಕಟ್ರಮಣ ಹೆಬ್ಬಾರ, ರಮೇಶ ಹೆಬ್ಬಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯ ಮಂಜುನಾಥ ಹೆಬ್ಬಾರ ಮಾತನಾಡಿ, ಕೋಣಾರ ಗ್ರಾಮದಲ್ಲಿ ಟವರ್ ಆಗಬೇಕೆನ್ನುವುದು ಜನರ ಬಹು ವರ್ಷಗಳ ಕನಸಾಗಿತ್ತು. ಟವರ್ ಗಾಗಿ ಸಾಕಷ್ಟು ಹೋರಾಟ, ಪ್ರಯತ್ನ ಮಾಡಲಾಗಿದೆ. ಕೊನೆಗೂ ನಮ್ಮೂರಿಗೆ ಟವರ್ ಮಂಜೂರಿ ಆಗಿ ಕೆಲಸ ಆರಂಭಿಸಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ. ಕೋಣಾರ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಆಗಬೇಕಿದ್ದು, ಇದಕ್ಕೆ ಜನರ ಒಗ್ಗಟ್ಟು ಮತ್ತು ಸಹಕಾರ ಅಗತ್ಯವೆಂದರು. ವೇದಿಕೆಯಲ್ಲಿ ಕೋಣಾರ ಗ್ರಾಪಂ ಉಪಾಧ್ಯಕ್ಷೆ ದೇವಿ ಗೊಂಡ, ಗ್ರಾಪಂ ಮಾಜಿ ಅಧ್ಯಕ್ಷ ಉದಯ ನಾಯ್ಕ, ಬಿಎಸ್ಸೆನ್ನೆಲ್ ನೌಕರ ದೇವಿದಾಸ ಮೊಗೇರ ಇದ್ದರು. ಹಿರಿಯ ಮುಖಂಡ ಅನಂತ ಹೆಬ್ಬಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *