ಕರಾವಳಿ ಪ್ರಭ ನ್ಯೂಸ್
ಭಟ್ಕಳ : ಭಟ್ಕಳದಲ್ಲಿ ಭಾರೀ ಗಾಳಿ ಮಳೆಗೆ 8 ಮನೆಗಳಿಗೆ ಹಾನಿಯಾದರೆ, ಕಳೆದ ಮೂರು ದಿನಗಳಿಂದ ಹೆಬಳೆ ಗ್ರಿಡ್ ನಲ್ಲಿ ಟ್ರಾನ್ಸಫಾರ್ಮರ್ ಕೆಟ್ಟು ಹೋಗಿ ವಿದ್ಯುತ್ ಕಣ್ಣಾಮುಚ್ಚಾಲೆ ಇನ್ನೂ ಸರಿ ಆಗಿಲ್ಲ. ಭಾರೀ ಗಾಳಿ ಮಳೆಗೆ ಪಟ್ಟಣದ ಮಣ್ಕುಳಿಯಲ್ಲಿರುವ ಮೋಹನ ಮಾಸ್ತಪ್ಪ ನಾಯ್ಕ ಅವರ ಮನೆಯ ಮೇಲ್ಚಾವಣಿ ಕುಸಿದು ಸಂಪೂರ್ಣ ಹಾನಿಯಾಗಿದೆ. ಮೇಲ್ಚಾವಣಿ ಬೀಳುವ ಸಂದರ್ಭದಲ್ಲಿ ಮನೆಯ ಒಳಗಡೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ. ವೆಂಕಟಾಪುರದಲ್ಲಿ ಲಕ್ಷ್ಮೀ ಸಣಕೂಸ ನಾಯ್ಕ ಅವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಮಾವಳ್ಳಿ 1 ಗ್ರಾಮದ ಮಂಗಳಿ ಬೈರಾ ಹರಿಕಾಂತ ಮನೆಯ ಎದುರಿನ ಮೇಲ್ಚಾವಣಿ ಹಾರಿ ಹೋಗಿ ಭಾಗಶಃ ಹಾನಿಯಾಗಿದೆ. ಶಿರಾಲಿ 1 ಗ್ರಾಮದ ಛಾಯಾ ಗಣಪತಿ ನಾಯ್ಕ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಜಾಲಿ ಪಟ್ಟಣ ಪಂಚಾಯ್ ವ್ಯಾಪ್ತಿಯ ಹುರಳಿಸಾಲನಲ್ಲಿ ಕುಪ್ಪಯ್ಯ ಜಟ್ಟಪ್ಪ ನಾಯ್ಕ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಮುಂಡಳ್ಳಿ ಗ್ರಾಮದ ಮೊಗೇರಕೇರಿಯ ಅಣ್ಣಪ್ಪ ಜಟ್ಟಪ್ಪ ಮೊಗೇರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮೆಲ್ಚಾವಣಿ ಭಾಗಶಃ ಹಾನಿಯಾಗಿದೆ. ಹಾಡುವಳ್ಳಿ ಗ್ರಾಮದ ಕೃಷ್ಣ ದೇವಪ್ಪ ನಾಯ್ಕರ ಮನೆತ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಹಾನಿ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಕೋರ್ಟ ಆವರಣದಲ್ಲಿ ಗಾಳಿಗೆ ಮರವೊಂದು ಬಿದ್ದಿದ್ದು, ಸನಿಹದಲ್ಲೇ ಇದ್ದ ವಕೀಲರೊಬ್ಬರ ಕಾರು ಸ್ವಲ್ಪದರಲ್ಲಿ ಹಾನಿಯಿಂದ ಪಾರಾಗಿದೆ.
ಮುಂದುವರಿದ ಸೆಕೆ !
ತಾಲ್ಲೂಕಿನಲ್ಲಿ ದಿನಂಪ್ರತಿ ಮಳೆ ಬರುತ್ತಿದ್ದರೂ ಸಹ ಸೆಕೆಯ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಮಳೆ ಬಂದು ಹೋದ ನಂತರ ಸೆಕೆ ಹೆಚ್ಚಿದ್ದು, ರಾತ್ರಿ ಕರೆಂಟ್ ಸಹ ಪದೇ ಪದೇ ಕೈಕೊಡುತ್ತಿರುವುದರಿಂದ ನಿದ್ದೆ ಮಾಡಲು ಕೂಡ ಆಗುತ್ತಿಲ್ಲ.ಒಂದುವಾರ ಕಾಲ ಸತತ ಮಳೆ ಸುರಿದರೆ ಮಾತ್ರ ಸೆಕೆಯ ಪ್ರಮಾಣ ಕಡಿಮೆ ಆಗಬಹುದಾಗಿದೆ. ಮಳೆ ಬರುತ್ತಿದ್ದರೂ ಬಾವಿ,ಕೆರೆ, ಹೊಳೆಯಲ್ಲಿ ನೀರು ಏರಿಕೆ ಆಗಿಲ್ಲ.
ಮುನ್ನೆಚ್ಚರಿಕೆ ಕ್ರಮಕ್ಕೆ ಆಗ್ರಹ
ತಾಲ್ಲೂಕಿನಲ್ಲಿ ಮಳೆ ಗಾಳಿ ಅಬ್ಬರ ಜೋರಾಗಿದ್ದರೂ ಸಹ ತಾಲ್ಲೂಕು ಆಡಳಿತದ ವತಿಯಿಂದ ಮಳೆಗಾಲದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸಭೆ ನಡೆದಂತಿಲ್ಲ. ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಕಾರ್ಯ ಸಮರ್ಪಕವಾಗಿ ಆಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಮೊನ್ನೆಯ ಭಾರೀ ಮಳೆಗೆ ಪಟ್ಟಣ ಕೆಲವು ಮನೆಗಳು ಮತ್ತು ದೇವಸ್ಥಾನೊಂದಕ್ಕೆ ನೀರು ನುಗ್ಗಿ ಜನರು ತೊಂದರೆ ಪಡುವಂತಾಗಿದೆ. ಸಮರ್ಪಕವಾಗಿ ಗಟಾರ ಸ್ವಚ್ಛತೆ ಕೆಲಸ ಆಗಿದ್ದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವ ಪ್ರಮೇಯ ಬರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ತಾಲ್ಲೂಕು ಆಡಳಿತ ಇನ್ನಾದರೂ ಮಳೆಗಾಲದ ಪೂರ್ವಭಾವಿ ಕೆಲಸದ ಬಗ್ಗೆ ಗಮನಹರಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಟ್ರಾನ್ಸಫಾರ್ಮರ್ ಅಳವಡಿಸಲು ಹರಸಾಹಸ
ಹೆಬಳೆಯಲ್ಲಿ ಕೆಟ್ಟು ಹೋದ ಟ್ರಾನ್ಸಫಾರ್ಮರ ಬದಲಾಗಿ ಅಳವಡಿಸಲು ಕಾರವಾರದಿಂದ ಟ್ರಾನ್ಸಫಾರ್ಮರ್ ತರಲಾಗಿದ್ದು, ಅಳವಡಿಸಲು ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಗುರುವಾರ ರಾತ್ರಿಯಿಂದ ಹರಸಾಹಸ ಪಡುತ್ತಿದ್ದಾರೆ. ಟ್ರಾನ್ಸಫಾರ್ಮರ್ ಅಳವಡಿಕೆ ಕಾರ್ಯ ಮುಗಿದಿದ್ದರೂ ಸಣ್ಣುಪುಟ್ಟ ಕೆಲಸ ಬಾಕಿ ಇರುವುದರಿಂದ ಶುಕ್ರವಾರ ಸಂಜೆಯೊಳಗೆ ವಿದ್ಯುತ್ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಸಮಸ್ಯೆಯಿಂದ ಜನರು ತೀವ್ರ ತೊಂದರೆ ಅನುಭವಿಸಿದ್ದರು.ಹಗಲು, ರಾತ್ರಿ ಕರೆಂಟ್ ಕಣ್ಣಾಮುಚ್ಛಾಲೆ ಆಟದಿಂದ ಪರದಾಡುವಂತಾಗಿತ್ತು.