ಕರಾವಳಿ ಪ್ರಭ ವಿಶೇಷ
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇದು ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಜಾತಿಯ ಮಾವಿನ ಹಣ್ಣು ಸಿಗುತ್ತಿದೆ. ಮಾವಿನ ಹಣ್ಣಿನ ಖರೀಧಿ ಮತ್ತು ಈ ಹಣ್ಣನ್ನು ಮನೆಗೆ ತಂದು ತಿನ್ನುವ ಮೊದಲು ಕೆಲವೊಂದು ಎಚ್ಚರಿಕೆ ವಹಿಸಲೇಬೇಕು. ಮಾರುಕಟ್ಟೆಗಳಲ್ಲಿ ಸಿಗುವ ವಿವಿಧ ಜಾತಿಯ ಮಾವಿನ ಹಣ್ಣು ಬಾಯಿಗೆ ಏನೋ ರುಚಿ ಕೊಡುತ್ತದೆ. ಆದರೆ ಆ ಮಾವಿನ ಹಣ್ಣು ಹಾಳಾಗದಂತೆ ದಿನಗಟ್ಟಲೆ ಸಂರಕ್ಷಿಸಿಡಲು ಮತ್ತು ಬೇಗನೇ ಹಣ್ಣಾಗಲು ಅದಕ್ಕೆ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಮಾವಿನ ಹಣ್ಣಿನ ಹೊರ ಭಾಗದಲ್ಲಿ ಬಿಳಿಯ ಆವರಣ ಕಂಡು ಬಂದರೆ ಅದಕ್ಕೆ ರಾಸಾಯನಿಕ ಬೆರೆಸಿದ್ದಾರೆ ಎನ್ನುವುದು ಪಕ್ಕಾ. ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಸಾಕಷ್ಟಿದ್ದು, ಅದು ದೇಹ ತೂಕೆ ಇಳಿಕೆಗೂ ಒಳ್ಳೆಯದು. ಅಲ್ಲದೆ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಬರುವ ಚರ್ಮದ ದದ್ದುಗಳು, ಮೊಡವೆ, ವಾಕರಿಕೆ ಇತ್ಯಾದಿ ಸಮಸ್ಯೆಗಳಿಗೆ ಮಾವಿನ ಹಣ್ಣು ಸೇವಿಸುವುದರಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗಿದೆ. ಆದರೆ ಮಾವಿನ ಹಣ್ಣನ್ನು ರಾಸಾಯನಿಕ ಮುಕ್ತ ಗೊಳಿಸಿ ಸೇವಿಸಬೇಕೆಂದರೆ ಮಾರುಕಟ್ಟೆಯಿಂದ ತಂದ ತಕ್ಷಣ ಸುಮಾರು ಒಂದು ಗಂಟೆ ಕಾಲ ಉಪ್ಪು ಹಾಕಿದ ನೀರಿನಲ್ಲಿ ಮುಳುಗಿಸಿಡಬೇಕು, ಬಳಿಕವಷ್ಟೇ ಇದನ್ನು ಸೇವಿಸಬೇಕು. ರಾಸಾನಿಯಕ ಸಿಂಪಡಿಸಿದ ಮಾವಿನ ಹಣ್ಣು ಸೇವಿಸುವಾಗ ಯಾವಾಗಲೂ ಸಿಪ್ಪೆ ತೆಗೆದೇ ಸೇವನೆ ಮಾಡಿದರೆ ಉತ್ತಮ. ಮಾವಿನ ಹಣ್ಣನ್ನು ನೀರಿನಲ್ಲಿ ಹಾಕಿದ ತಕ್ಷಣ ಅದು ಮುಳುಗಿದರೆ ನೈಸರ್ಗಿಕವಾಗಿ ಹಣ್ಣಾಗಿರುವುದು ಎಂದರ್ಥ. ತೇಲಿದರೆ ಅದನ್ನು ಕೃತಕವಾಗಿ ಹಣ್ಣು ಮಾಡಲಾಗಿದೆ ಎಂದರ್ಥ. ಹೀಗಾಗಿ ಮಾವಿನ ಹಣ್ಣು ಸೇವನೆಗೆ ಮುಂಚೆ ಅದನ್ನು ಚೆನ್ನಾಗಿ ತೊಳೆದು ಸೇವಿಸಬೇಕು. ಸಾಧ್ಯವಾದಷ್ಟು ನೈಸರ್ಗಿಕವಾಗಿ ಹಣ್ಣು ಮಾಡಲಾದ ಮಾವಿನ ಹಣ್ಣನ್ನೇ ಸೇವಿಸಬೇಕು. ಇದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಮಾವಿನ ಹಣ್ಣು ಖರೀಧಿಯಲ್ಲಿ ಎಚ್ಚರಿಕೆ ವಹಿಸಬೇಕು. ದುಡ್ಡು ಮಾಡುವ ಆಸೆಗೆ ರಾಸಾಯನಿಕ ಬಳಸಿ ಹಣ್ಣು ಮಾಡುವ ಕೃತ್ಯ ಎಲ್ಲೆಡೆ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಅಗತ್ಯ. ಆದಷ್ಟು ರಾಸಾಯನಿಕ ರಹಿತವಾದ ತಾಜಾ ಮಾವಿನ ಹಣ್ಣನ್ನು ಹುಡಕಿ ಖರೀಧಿಸಿದರೆ ಉತ್ತಮ.