ಭಟ್ಕಳ : ಕೇಂದ್ರ ಸರಕಾರ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಆಗ್ರಹಿಸಿ ಮತ್ತು ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ನವೆಂಬರ್ 21ರಂದು ಹಮ್ಮಿಕೊಂಡಿರುವ ರಾಜ್ಯಮಟ್ಟದ ಅರಣ್ಯವಾಸಿಗಳ ಬೆಂಗಳೂರು ಚಲೋದಲ್ಲಿ ಭಟ್ಕಳ ಸೇರಿದಂತೆ ಜಿಲ್ಲೆಯ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ಜಿಲ್ಲಾ ಸಂಚಾಲಕ ದೇವರಾಜ ಗೊಂಡ ಹೇಳಿದರು. ಅವರು ತಾಲ್ಲೂಕಿನಲ್ಲಿ ಅರಣ್ಯವಾಸಿಗಳಿಗೆ ಬೆಂಗಳೂರು ಚಲೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಸಭೆಯಲ್ಲಿ ಮಾತನಾಡಿ,ರಾಜ್ಯ ಸರಕಾರ ಕರಡು ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಮಾಡಿರುವುದು ಸ್ವಾಗತಾರ್ಹವಾಗಿದೆ. ಕಸ್ತೂರಿ ರಂಗನ್ ವರದಿ ಜ್ಯಾರಿಯಾದರೆ ಅರಣ್ಯವಾಸಿಗಳ ಮೇಲೆ ಪರಿಣಾಮ ಆಗಲಿದೆ. ಕೇಂದ್ರ ಸರಕಾರ ಅರಣ್ಯವಾಸಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕರಡು ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಬೇಕು. ಜ್ಯಾರಿ ಮಾಡಲು ಉದ್ದೇಶಿರಿಸುವ ಕಸ್ತೂರಿರಂಗನ್ ವರದಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮತ್ತು ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನವೆಂಬರ್ 21 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಈ ಬಗ್ಗೆ ಅರಣ್ಯವಾಸಿಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಅರಣ್ಯವಾಸಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಸುಮಾರು 2 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದ ಅವರು ಸರಕಾರ ಅರಣ್ಯವಾಸಿಗಳು ಬಹಳ ವರ್ಷಗಳಿಂದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದು, ಸರಕಾರ ಅರಣ್ಯವಾಸಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅತಿಕ್ರಮಣ ಹೋರಾಟಗಾರರ ವೇದಿಕೆಯ ಸದಸ್ಯರಾದ ಚಂದ್ರು ನಾಯ್ಕ, ರತ್ನಾ ನಾಯ್ಕ, ಚಂದ್ರ ಎಸ್ ನಾಯ್ಕ,ಸಂತೋಷ ನಾಯ್ಕ , ಪದ್ಮಯ್ಯ ನಾಯ್ಕ, ರಾಮಾ ನಾಯ್ಕ, ನಾರಾಯಣ ಮೊಗೇರ,ಗಜಾನನ ಭಂಡಾರಿ, ಲಕ್ಷ್ಮಣ ಮರಾಠಿ ಮುಂತಾದವರಿದ್ದರು.