ಕರಾವಳಿ ಪ್ರಭ ನ್ಯೂಸ್
ಕೆಡಿಸಿಸಿ ಬ್ಯಾಂಕಿನ ಭಟ್ಕಳದ ಕುಂಟವಾಣಿ (ಹಾಡವಳ್ಳಿ ಶಾಖೆ), ಸರ್ಪನಕಟ್ಟೆ, ಪಟ್ಟಣದ ಹೂವಿನ ಮಾರುಕಟ್ಟೆಯ ನೂತನ ಶಾಖೆಯನ್ನು ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಲೋಕಾರ್ಪಣಗೊಳಿಸಿದರು.
ಕುಂಟವಾಣಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ 104 ವರ್ಷ ಇತಿಹಾಸ ಹೊಂದಿರುವ ಕೆಡಿಸಿಸಿ ಬ್ಯಾಂಕಿನ ಕೊಡುಗೆಯೂ ಇದೆ. ಕೆಡಿಸಿಸಿ ಬ್ಯಾಂಕು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಮಂಚೂಣಿಯಲ್ಲಿರುವ ಬ್ಯಾಂಕಾಗಿದೆ. ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಕೆಡಿಸಿಸಿ ಬ್ಯಾಂಕು ಭದ್ರವಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಗ್ರಾಮಾಂತರ ಭಾಗದಲ್ಲಿ ಬ್ಯಾಂಕಿಂಗ್ ಸೌಲಭ್ಯ ಸಿಗುವಂತಾಗಲು ಗ್ರಾಮೀಣ ಭಾಗದಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುತ್ತಿದೆ. ಕೆಡಿಸಿಸಿ ಬ್ಯಾಂಕಿನಲ್ಲಿ ಶಿಕ್ಷಣ, ಉದ್ಯಮ ಸೇರಿದಂತೆ ವಿವಿಧ ರೀತಿಯ ಸಾಲವನ್ನು ನೀಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸೌಲಭ್ಯ ನಮ್ಮ ಬ್ಯಾಂಕಿನಲ್ಲೂ ಸಿಗುತ್ತಿದೆ. ಇದರ ಪ್ರಯೋಜನವನ್ನು ಗ್ರಾಮಾಂತರ ಜನರು ಪಡೆದುಕೊಳ್ಳಬೇಕು. ಭಟ್ಕಳದ ಹೊಸ ಶಾಖೆಗಳನ್ನು ಲಾಭದತ್ತ ಕೊಂಡೊಯ್ಯಲು ಗ್ರಾಹಕರು ಉತ್ತಮ ವ್ಯವಹಾರ ಮಾಡುವುದರ ಮೂಲಕ ಸಹಕಾರ ನೀಡಬೇಕೆಂದರು.
ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ,ಕೆಡಿಸಿಸಿ ಬ್ಯಾಂಕಿನಿಂದ ಒಟ್ಟೂ 21 ಹೊಸ ಶಾಖೆ ತೆರೆಯಲು ನಿರ್ಧರಿಸಲಾಗಿದ್ದು, ಅದರಲ್ಲಿ 16 ಶಾಖೆ ಈಗಾಗಲೇ ಉದ್ಘಾಟನೆಗೊಂಡಿದೆ. ಬ್ಯಾಂಕು 133 ಕೋಟಿ ಶೇರು ಬಂಡವಾಳ, 347 ಕೋಟಿ ಕಾಯ್ದಿಟ್ಟ ನಿಧಿ, 4500 ಕೋಟಿ ದುಡಿಯುವ ಬಂಡವಾಳ, 3440 ಕೋಟಿ ಠೇವಣಿ ಹೊಂದಿದ್ದು, 3040 ಕೋಟಿ ಸಾಲ ವಿತರಿಸಿದೆ. 1239 ಕೋಟಿ ಕೃಷಿ ಸಾಲ ನೀಡಿದ್ದು, ಎನ್ ಪಿ ಎ ಪ್ರಮಾಣ ಶೇ. 2ರಷ್ಟಿದೆ. ಬ್ಯಾಂಕಿನಿಂದ ಹೊರದೇಶದಲ್ಲಿ ಉನ್ನತ ಶಿಕ್ಷಣ ಕಲಿಯುವವರಿಗೆ 40 ಲಕ್ಷ ಹಾಗೂ ಸ್ವದೇಶದಲ್ಲಿ ಉನ್ನತ ಶಿಕ್ಷಣ ಕಲಿಯುವವರಿಗೆ ಶೇ. 7 ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ವಿತರಿಸಲಾಗುತ್ತಿದ್ದ, ಗ್ರಾಹಕರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬ್ಯಾಂಕಿನ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಕೆಡಿಸಿಸಿ ಬ್ಯಾಂಕು ಕ್ರಾಂತಿಕಾರಿ ಬದಲಾವಣೆ ಹೊಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿಗೆ 3 ಬಾರಿ ರಾಷ್ಟ್ರೀಯ, 42 ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಬ್ಯಾಂಕು ನಿರಂತರ ಲಾಭದಲ್ಲಿ ಮುನ್ನುಗ್ಗುತ್ತಿದ್ದು, ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರು, ಉದ್ಯಮಿಗಳಿಗೆ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದೀಗ ಕೆಡಿಸಿಸಿ ಬ್ಯಾಂಕಿನ ನಡೆ ಗ್ರಾಮೀಣ ಭಾಗದ ಕಡೆಗೆ ಎನ್ನುವ ಧ್ಯೇಯ ಇಟ್ಟುಕೊಂಡು ಗ್ರಾಮಾಂತರ ಭಾಗದಲ್ಲಿ ಹೊಸ ಶಾಖೆ ಸ್ಥಾಪಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಶಾಖೆಯ ಕಟ್ಟಡ ಮಾಲಿಕ ಹಾಗೂ ಹಾಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ ಡಿ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ಟ, ಮಾರುಕೇರಿ ಸೊಸೈಟಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ಶ್ರೀಕಂಠ ಹೆಬ್ಬಾರ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಊರ ಪ್ರಮುಖ ಬಡಿಯಾ ಗೊಂಡ, ಹಾಡವಳ್ಳಿ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ನಾಯ್ಕ, ಮಾರುತಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುಬ್ರಾಯ ಕಾಮತ್ ಇದ್ದರು. ಶಾಖೆಯ ವ್ಯವಸ್ಥಾಪಕ ಲೋಹಿತ್ ಬೋರ್ಕರ್ ಸ್ವಾಗತಿಸಿದರು. ಕೆಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯ ಸಿಬ್ಬಂದಿ ಗಿರೀಶ ಮಾಡಗೇರ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಕೆಡಿಸಿಸಿ ಬ್ಯಾಂಕಿನ ಭಟ್ಕಳ ಶಾಖೆಯ ವ್ಯವಸ್ಥಾಪಕ ರೋಹಿದಾಸ ನಾಯ್ಕ, ಮೇಲ್ವಿಚಾರಕ ಲೋಕೇಶ ಶಿರೂರು, ವಿಷ್ಣುಮೂರ್ತಿ ಹೆಗಡೆ ಸೇರಿದಂತೆ ವಿವಿಧ ಶಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಹಕರಿಸಿದರು. ಇದೇ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕಿನಿಂದ ಸಹಕಾರಿ ಸಂಘಗಳ ಅಧ್ಯಕ್ಷರು, ಊರಿನ ಪ್ರಮುಖರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಧ್ಯಾಹ್ನ ಸರ್ಪನಕಟ್ಟೆ ಮತ್ತು ಪಟ್ಟಣ ಹೂವಿನಮಾರುಕಟ್ಟೆ ಶಾಖೆಯನ್ನೂ ಸಹ ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಶಿರಾಲಿ ಸೊಸೈಟಿ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಮುಖರಾದ ಈರಪ್ಪ ಗರ್ವಿಕರ್, ಖೇದಾರ ಕೊಲ್ಲೆ, ಪರಮೇಶ್ವರ ದೇವಡಿಗ, ಶ್ರೀಧರ ಹೆಬ್ಬಾರ, ಜಾಫರ್ ಸಾಧೀಕ್,ರಾಜಂ ಹಿಚ್ಕಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.