ಕರಾವಳಿ ಪ್ರಭ ನ್ಯೂಸ್
ಭಟ್ಕಳ ತಾಲೂಕಿನ ಶಿಕ್ಷಕ ದಂಪತಿಗಳಾದ ಶಿವಕುಮಾರ ಹಿಚ್ಕಡ್ ಹಾಗೂ ಮಂಜುಳಾ ಹಿಚ್ಕಡ್ ಅವರ ಪುತ್ರಿ ಶ್ರೀಶಾ ಶಿವಕುಮಾರ ಹಿಚ್ಕಡ್ ಅವರನ್ನು ಅಂಕೋಲಾದ ಗಾಂವಕರ್ ಮೆಮೊರಿಯಲ್ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಮಂಗಳೂರಿನಲ್ಲಿ ತನ್ನ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡ ಪುಟ್ಟ ಬಾಲಕಿ ಅನೇಕ ಪ್ರಸಿದ್ಧ ಮೇಳಗಳಲ್ಲಿ ಕಲಾ ಪ್ರದರ್ಶನವನ್ನು ಉತ್ತಮವಾಗಿ ನೀಡಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಓದಿನಲ್ಲಿ ಹಾಗೂ ಕ್ರೀಡೆಯಲ್ಲಿಯೂ ಪ್ರತಿಭಾವಂತೆಯಾಗಿರುವ ಶ್ರೀಶಾ ಅಂತರ್ ಜಿಲ್ಲಾ ವಿಭಾಗದಲ್ಲಿ ಹಾಗೂ ಅಂತರ್ ವಿಭಾಗೀಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನವನ್ನು ಗಳಿಸಿದ್ದಾಳೆ. ಜಯಶಂಕರ್ ಪಂಡಿತ ಅವರ ಬಳಿ ನೃತ್ಯ ಅಭ್ಯಾಸ ಹಾಗೂ ದಯಾನಂದ ಕೋಡಿಕಲ್ ಅವರ ಬಳಿ ಭಾಗವತಿಕೆ ಅಭ್ಯಾಸವನ್ನು ಮಾಡುತ್ತಿರುವ ಈಕೆಯು ಅತಿ ಚಿಕ್ಕ ವಯಸ್ಸಿನಲ್ಲಿಯೇ ತೆಂಕುತಿಟ್ಟಿನ ಭಾಗವತಿಕೆ ಮತ್ತು ಪುರುಷ ಹಾಗೂ ಸ್ತ್ರೀ ವೇಷಧಾರಿಯಾಗಿ ಮಿಂಚಿರುವ ಯಕ್ಷ ಪ್ರತಿಭೆಯಾಗಿದ್ದಾಳೆ. ಈ ಸಂದರ್ಭದಲ್ಲಿ ವಿಧುಶಿ ಜ್ಯೋತಿ ಹೆಗಡೆ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಸೋಮಶೇಖರ ವಿಶ್ವನಾಥ ದೇಸಾಯಿ, ದೇವಾನಂದ ಬಿ. ಗಾಂವಕರ್ ಮುಂತಾದವರು ಉಪಸ್ಥಿತರಿದ್ದರು.